ಅ.ನ.ಕೃ ಪ್ರತಿಷ್ಠಾನ (ರಿ) ಬೆಂಗಳೂರು.

ಡಾ|| ಅ.ನ.ಕೃ ಕನ್ನಡ ವಿದ್ಯಾರ್ಥಿ ವೇತನ ಯೋಜನೆ.
(ಕೊಡುಗೆ:ನಿರ್ಮಾಣ್ ಶೆಲ್ಟರ್‍ಸ್ (ಬೆಂಗಳೂರು) ಪ್ರೈ. ಲಿ.)

ಪ್ರತಿವರ್ಷವೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ/ಐಚ್ಚಿಕ ಕನ್ನಡ/ಕನ್ನಡ ಭಾಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವಿಭಾಗದಲ್ಲೂ ೫೦೦೦ ರೂ ನಗದು ಬಹುಮಾನ ನೀಡಿಕೆ.

ಕನ್ನಡ ಭಾಷಾ-ಸಂಸ್ಕೃತಿಗಳ ಉನ್ನತಿಗಾಗಿ, ವಿದ್ಯಾರ್ಥಿ ಸಮುದಾಯವನ್ನು ಪ್ರೇರೇಪಿಸಲು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ/ಕನ್ನಡ ಭಾಷೆ/ಐಚ್ಚಿಕ ಕನ್ನಡ ವಿಷಯಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಐವರು ವಿದ್ಯಾರ್ಥಿಗಳಿಗೆ, ಪ್ರತಿವರ್ಷ ಐದು ಸಾವಿರ ರೂಪಾಯಿ ನಗದು ವೇತನ ನೀಡಲು ನಿರ್ಧರಿಸಿದೆ. ಇದನ್ನು ೧೯೯೯೭-೯೮ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ ಫಲಿತಾಂಶದ ಆಧಾರದ ಮೇರೆಗೆ ನೀಡಲಾಗುವುದು. ಈ ವಿದ್ಯಾರ್ಥಿ ವೇತನವು ಪುರಸ್ಕೃತ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಗಳು, ಕಾಲೇಜು ಶುಲ್ಕ ಇತರ ಖರ್ಚುಗಳಿಗೆ ವಿನಿಯೋಗವಾಗಲಿ ಎಂಬ ಸದುದ್ದೇಶದಿಂದ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭಾಸ ಕಾಲದಲ್ಲಿ ಕನ್ನಡದಲ್ಲಿ ಅತ್ಯುನ್ನತ ಮಟ್ಟವನ್ನು ಮುಟ್ಟಿ ನಾಡು-ನುಡಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡರೆ ನಮ್ಮ ಯೋಜನೆಯು ಸಾರ್ಥಕವಾಗುತ್ತದೆ.

ಕನ್ನಡ ಸಾಹಿತ್ಯ ಸಾರ್ವಭೌಮ, ಕಾದಂಬರಿ ಸಾಮ್ರಾಟ ಡಾ|| ಅ.ನ.ಕೃಷ್ಣರಾಯರ ಪರಿಚಯ ಕನ್ನಡಿಗರೆಲ್ಲರಿಗೆ ಇದೆ. ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ, ನಾಡಿನ ಏಕೀಕರಣಕ್ಕೆ, ಕನ್ನಡಿಗರಲ್ಲಿ ಕನ್ನಡತನವನ್ನು ಮೂಡಿಸುವ ಜಾಗೃತಿಗಾಗಿ, ಮಾನವೀಯತೆಯ ಪ್ರವಾದಿಯಾಗಿ ಬಾಳಿನುದ್ದಕ್ಕೂ ದುಡಿದರು. ನಾಡಸೇವೆಗಾಗಿ ತಮ್ಮ ಜೀವನವನ್ನೇ ಧಾರೆಯೆರೆದರು. ಅಂತಹ ಪುಣ್ಯಪುರುಷರ ಹೆಸರಿನಲ್ಲಿ ಅವರ ನೆನಪಿಗಾಗಿ ಪ್ರಾರಂಭಿಸಿರುವ ಈ ಯೋಜನೆ ಒಂದು ಸಾರ್ಥಕ ಹೆಜ್ಜೆ ಎಂದು ತಿಳಿದಿದ್ದೇವೆ.

ಈ ಯೋಜನೆಗೆ ಬೆಂಗಳೂರು ಬಸವನಗುಡಿಯಲ್ಲಿ ಕೇಂದ್ರ ಕಛೇರಿ ಇರುವ ನಿರ್ಮಾಣ್ ಶೆಲ್ಟರ್‍ಸ್ ಸಂಸ್ಥೆಯ ಮಾಲೀಕರಾದ ಶ್ರೀ ಲಕ್ಷ್ಮಿನಾರಾಯಣ ಅವರು ಪ್ರಾಯೋಜಕರಾಗಿ ಕೊಡುಗೆ ನೀಡಲು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ನಮ್ಮ ನಗರದಲ್ಲಿ ಅನೇಕ ವಸತಿ ನಿವೇಶನ ಯೋಜನೆಗಳನ್ನು ಎಂದರೆ ನಿಸರ್ಗ, ನಿರ್ಮಾಣ್, ನಂದನವನ ಇತ್ಯಾದಿ ಸೃಜಿಸಿ ನಾಡಿನ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ವ್ಯಾಪಾರ-ಲಾಭಗಳಿಕೆಯೇ ಆದರ್ಶವಾಗಿಟ್ಟುಕೊಳ್ಳದೆ, ಕನ್ನಡ ನಾಡು-ನುಡಿಯ ಸೇವೆಯಲ್ಲಿ ಆಸಕ್ತರಾಗಿ ಅನಕೃ ಪ್ರತಿಷ್ಠಾನದ ಕೆಲವು ಯೋಜನೆಗಳಲ್ಲಿ ಸಹಭಾಗಿಯಾಗಿದ್ದಾರೆ. ಪ್ರತಿವರ್ಷ ನೀಡುವ “ಡಾ||ಅನಕೃ” ಪುರಸ್ಕಾರಕ್ಕೆ ೧೯೯೮ನೇ ಸಾಲಿನಿಂದ ಪ್ರಾಯೋಜಕರಾಗಿ ಸಹಾಯ ಮಾಡುತ್ತಿದ್ದಾರೆ. ಈ ರೀತಿಯ ಸೇವೆಯಿಂದ ಇಂತಹ ಸಂಸ್ಥೆಗಳಿಗೆ ಇದು ಮಾದರಿ ಸಂಸ್ಥೆಯಾಗಿದೆ.

ಅನಕೃ ಪ್ರತಿಷ್ಠಾನವು ೧೯೯೩ರಲ್ಲಿ ಸ್ಥಾಪನೆಯಾಯಿತು. ಅದರ ಅಧ್ಯಕ್ಷರಾಗಿ ಮಾಜಿ ಸಚಿವರು, ಶಾಸಕರೂ ಆದ ಶ್ರೀ ಹಾರ್ನಳ್ಳಿ ರಾಮಸ್ವಾಮಿ ಅವರು ಇದ್ದಾರೆ. ಹಾಗೆಯೇ ಪ್ರತಿಷ್ಠಾನದಲ್ಲಿ ಖ್ಯಾತ ಲೇಖಕರೂ, ವಿಮರ್ಶಕರೂ, ರಂಗನಟರೂ, ಪತ್ರಕರ್ತರೂ ಇದ್ದು ಚಟುವಟಿಕೆಗಳನ್ನು ನಿರ್ದೇಶಿಸುತ್ತಿದ್ದಾರೆ. ಅನಕೃ ಕುಟುಂಬ ವರ್ಗದವರೂ ಮತ್ತು ಆತ್ಮೀಯರೂ ಪ್ರತಿಷ್ಠಾನದಲ್ಲಿದ್ದು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಾನವು ಕಳೆದ ಐದು ವರ್ಷಗಳಲ್ಲಿ ಅನೇಕ ಗಮನಾರ್ಹ ಕೆಲಸಗಳನ್ನು ಮಾಡಿ, ಅನಕೃ ಅವರ ಹೆಸರು ಚಿರಸ್ಥಾಯಿಯಾಗಲು, ಅವರ ಚಿಂತನೆಯು ಎಲ್ಲೆಡೆ ಪ್ರವಹಿಸಲು, ಅವರ ಕೃತಿಗಳು ಕನ್ನಡಾಭಿಮಾನಿಗಳ ಕೈ ಸೇರಲು ಶ್ರಮಿಸಿ ಸಾರ್ಥಕವಾಗಿದೆ. ಈ ಕನ್ನಡ ವಿದ್ಯಾರ್ಥಿ ವೇತನ ಯೋಜನೆಯು ಕರ್ನಾಟಕದ ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ-ಸಂಸ್ಕೃತಿಗಳ ಬಗ್ಗೆ ಅನನ್ಯ ಭಾವೋತ್ಕರ್ಷವನ್ನು ತಂದು, ಅಪಾರ ವಿದ್ಯಾರ್ಜನೆಯಿಂದ, ಹಿರಿಯರು ಹಚ್ಚಿದ ಜ್ಞಾನ ದೀವಟಿಗೆಯನ್ನು ಹಿಡಿದು ಮುಂದುವರೆಯಲಿ ಎಂದು ಹಾರೈಸುತ್ತೇವೆ.

|| ಜೈ ಕರ್ನಾಟಕ ||
|| ಜೈ ಭುವನೇಶ್ವರಿ ||

ಇಂತು
ಅ.ನ.ಕೃ ಪ್ರತಿಷ್ಠಾನ (ರಿ)
ನಂ ೫೭, ವಿದ್ಯಾಪೀಠ ರಸ್ತೆ, ಐ.ಟಿ.ಐ. ಕಾಲೋನಿ,
ಬನಶಂಕರಿ ೩ನೇ ಹಂತ
ಬೆಂಗಳೂರು - ೫೬೦೦೮೫
ದೂರವಾಣಿ - ೬೬೯೨೬೯೪