ಅನಕೃ ಪ್ರತಿಷ್ಠಾನ

ಕನ್ನಡದ ಕಟ್ಟಾಳು ಶ್ರೀ ಅರಕಲಗೂಡು ನರಸಿಂಗರಾಯ ಕೃಷ್ಣರಾಯರು ಮಡಿದು ಈಗಾಗಲೇ ೨೬ ವರ್ಷಗಳೇ ಕಳೆದಿವೆ. ಅನಕೃ ಅವರ ಸಾಧನೆ ಶ್ರಮಗಳಿಗೆ ಸಿಗಬೇಕಾಗಿದ್ದ ಸನ್ಮಾನ ಗೌರವಗಳು ಸರಿಯಾಗಿ ದೊರೆಯಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗೆ ಮೊದಲಿನಿಂದಲೂ ಇದೆ. ಅನಕೃ ಅವರು ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರ ಹೆಸರು ಕನ್ನಡ ನಾಡಿನಲ್ಲಿ ನಿರಂತರವಾಗಿ ಬೆಳಗಲಿ ಎಂಬ ಉದ್ದೇಶಗಳಿಂದ ಕೆಲವು ಅಭಿಮಾನಿಗಳು ಸೇರಿ ಕಟ್ಟಿದ ಸಂಸ್ಥೆಯೇ ಅನಕೃ ಪ್ರತಿಷ್ಠಾನ.

ದಿನಾಂಕ ೧೧.೮.೯೩ ರಂದು ಜಯನಗರದ ಹೆಚ್.ಎನ್. ಕಲಾಕ್ಷೇತ್ರದಲ್ಲಿ ಸರ್ವಶ್ರೀ ಗೊ.ರು.ಚೆನ್ನಬಸಪ್ಪ, ಮಾಸ್ಟರ್ ಹಿರಣ್ಣಯ್ಯ, ಶಾಮಂ ಕೃಷ್ಣರಾಯರಿಂದ ಭಾಷಣಗಳು, ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಮಾಡುವುದರ ಮೂಲಕ ಅನಕೃ ಪ್ರತಿಷ್ಠಾನದ ಕಾರ್ಯಕಲಾಪಗಳು ಶುರುವಾದವು. ಪ್ರತಿಷ್ಠಾನದ ಕಾರ್ಯಕಾರೀ ಸಮಿತಿಯು ಶ್ರೀ ಹಾರ್ನಹಳ್ಳಿ ರಾಮಸ್ವಾಮಿ, ಶ್ರೀ ಪೆರಿಕಲ್ ಮಲ್ಲಪ್ಪ, ಶ್ರೀ ಹಾ.ಮಾ.ನಾಯಕ್, ಶ್ರೀ ಎಲ್.ಎಸ್.ಶೇಷಗಿರಿರಾವ್, ಶ್ರೀ ಎಚ್.ಕೆ.ರಂಗನಾಥ್, ಶ್ರೀ ಮಾಸ್ಟರ್ ಹಿರಣ್ಣಯ್ಯ, ಶ್ರೀ ರವೀಂದ್ರನಾಥ್ ಅನಕೃ ಮುಂತಾದ ಗಣ್ಯರನ್ನೊಳಗೊಂಡು ರಚಿತವಾಯಿತು. ದಿನಾಂಕ ೭/೨/೯೪ ರಂದು ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಸರ್ವಶ್ರೀ ಹಾರ್ನಳ್ಳಿ ರಾಮಸ್ವಾಮಿಯವರ ಅಧ್ಯಕ್ಷತೆ, ವೀರಪ್ಪ ಮೊಯಿಲಿ ಮುಖ್ಯ ಅತಿಥಿ, ಡಾ| ವೇಣುಗೋಪಾಲರಾವ್ ಮತ್ತು ಅ.ರಾ.ಮಿತ್ರರ ಭಾಷಣಗಳು, ದೀಪ ಬೆಳಗುವುದರ ಮೂಲಕ ವಿಜೃಂಭಣೆಯಿಂದ ಅನಕೃ ಪ್ರತಿಷ್ಠಾನ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಅನಕೃ ಕಲಾ ಭವನದ ನಿವೇಶನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಅನಕೃ ಕಾದಂಬರಿಶ್ರೀ ಪ್ರಶಸ್ತಿ (ಡಾ|| ಅನಕೃ ಪ್ರಶಸ್ತಿ):
೧೯೯೫ ನೇ ಇಸವಿಯಿಂದ ಪ್ರಾರಂಭವಾದ ಉತ್ತಮ ಕಾದಂಬರಿ ಪ್ರಶಸ್ತಿ ಕಾರ್ಯಕ್ರಮ. ಇದನ್ನು ರೂಪಿಸಿದವರು ಅನಕೃ ಸಾಹಿತ್ಯ ಮತ್ತು ವ್ಯಕ್ತಿತ್ವದಿಂದ ಅಪಾರವಾಗಿ ಪ್ರಭಾವಿತರಾದ ಶ್ರೀ ಕೆ.ಟಿ. ಚಂದ್ರಶೇಖರನ್, ತಮ್ಮ ಸಂಪಾದನೆಯ ಹಣವನ್ನು ನಿಡುಗಂಟಾಗಿ ಇಟ್ಟು, ಅದರ ಬಡ್ಡಿ ಗಳಿಕೆಯಿಂದ, ಪ್ರತಿ ವರ್ಷ ೧೦,೦೦೦ ರೂಗಳ ನಗದು ಬಹುಮಾನ, ಪಾರಿತೋಷಕ, ಗೌರವ ಸಮಾರಂಭವನ್ನು ಎರಡು ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಉದಯೋನ್ಮುಖ ಬರಹಗಾರರಿಗೆ, ಕನ್ನಡದ ಕಾದಂಬರಿ ಲೋಕ ಇನ್ನೂ ಪರಿಪುಷ್ಠವಾಗಿ, ಗುಣಶ್ರೇಷ್ಠವಾಗಿ ಬೆಳೆಯಲು, ಆಯಾ ವರ್ಷದಲ್ಲಿ ಪ್ರಕಟವಾದ ಕಾದಂಬರಿಗಳನ್ನು ಸಂಗ್ರಹಿಸಿ, ಮೂವರು ತೀರ್ಪುಗಾರರು ಅವನ್ನು ಓದಿ, ಕೊಟ್ಟ ತೀರ್ಮಾನದ ಮೇಲೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ೧೯೯೫ ನೇ ಇಸವಿಯಲ್ಲಿ ಶ್ರೀ ಜಿ.ಕೆ. ಐತಾಳರ ಕೃತಿ ‘ಕುಜ’ ಕಾದಂಬರಿಗೂ, ೧೯೯೬ ರಲ್ಲಿ ಶ್ರೀ ಬಿ.ಎಲ್. ವೇಣು ಅವರ ಕೃತಿ ‘ಮಹಾನದಿ’ ಕಾದಂಬರಿಗೂ ಕೊಡಲಾಯಿತು.

೧೯೯೭ ನೇ ವರ್ಷದ ಪ್ರಶಸ್ತಿ ಒಳಗೊಂಡಂತೆ ಈ ಪ್ರಶಸ್ತಿಯನ್ನು “ಡಾ| ಅನಕೃ ಪ್ರಶಸ್ತಿ” ಎಂದು ಹೆಸರಿಸಿ ಶ್ರೀ ನರಹಳ್ಳಿ ಬಾಲಸುಬ್ರಮಣ್ಯ, ಶ್ರೀ ಹೆಚ್.ಎಸ್. ವೆಂಕಟೇಶಮೂರ್ತಿ ಹಾಗೂ ಶ್ರಿ ಜಿ.ಎನ್.ರಂಗನಾಥರಾವ್ ಅವರುಗಳನ್ನೊಳಗೊಂಡ ಆಯ್ಕೆ ಸಮಿತಿ, ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗೆ ಈ ಪ್ರಶಸ್ತ್ರಿ ಪತ್ರ ಮತ್ತು ೨೫,೦೦೦ ರೂ, ಗೌರವಧನವನ್ನು ನೀಡಲು ತೀರ್ಮಾನಿಸಿರುತ್ತದೆ. ಈ ಕಾರ್ಯಕ್ರಮವು ಮಹತ್ತರವಾದುದೂ, ಜವಾಬ್ದಾರಿಯುತವಾದುದೂ ಆದುದರಿಂದ ‘ಅನಕೃ ಪ್ರಶಸ್ತಿ ಪ್ರದಾನ ಪರಿಷತ್ತು’ ಎಂಬ ಅಂಗ ಸಂಸ್ಥೆಯ ಅಡಿಯಲ್ಲಿ ಒಂದು ಸಮಿತಿ ರಚನೆಯಾಗಿ ನಡೆಯುತ್ತಿದೆ. ಅದರ ಅಧ್ಯಕ್ಷರು ಶ್ರೀ ಕೆ.ಟಿ. ಚಂದ್ರಶೇಖರನ್. ಮಹಾ ಪೋಷಕರಾಗಿ ಶ್ರೀ ಶ್ರೀನಿವಾಸ ಉಡುಪ, ಪ್ರಧಾನ ಕಾರ್ಯದರ್ಶಿ ಶ್ರೀ ಸೂರ್ಯನಾರಾಯಣ ಚಡಗ, ಖಜಾಂಚಿಯಾಗಿ ಶ್ರೀ ಬಿ.ಎಂ. ರಂಗನಾಥ್, ಹಾಗೂ ಸದಸ್ಯರುಗಳಾಗಿ ಶ್ರೀಮತಿ ಹೆಚ್.ಎಸ್. ಪಾರ್ವತಿ, ಶ್ರೀ ಹೋ.ರಾ. ಸತ್ಯನಾರಾಯಣರಾವ್, ಶ್ರೀ ಗೌತಮ್ ಅನಕೃ ಹಾಗೂ ಶ್ರೀಮತಿ ಉಷ. ಪಿ. ರೈ ಅವರುಗಳು ಇದ್ದಾರೆ. ಪ್ರತಿವರ್ಷ, ಈ ಕಾರ್ಯಕ್ರಮವನ್ನು ಬೆಂಗಳೂರಿನ ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆ ಪ್ರಾಯೋಜಿಸುತ್ತಿದೆ. ಇದುವರೆಗೂ ಪ್ರೊ. ಎಲ್.ಎಸ್.ಶೇಷಗಿರಿರಾವ್(೧೯೯೭), ಡಾ||ಎಂ.ಚಿದಾನಂದಮೂರ್ತಿ(೧೯೯೮), ಶ್ರೀ ವ್ಯಾಸರಾಯ ಬಲ್ಲಾಳ(೧೯೯೯), ಶ್ರೀ ಸಾ. ಕೃ. ರಾಮಚಂದ್ರರಾಯರು(೨೦೦೦) ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಅಪಾರ ಜನಮೆಚ್ಚುಗೆ ಗಳಿಸಿದೆ.

ಅನಕೃ ವಿದ್ಯಾರ್ಥಿ ವೇತನ:
ಅನಕೃ ಪ್ರತಿಷ್ಠಾನದ ಎಲ್ಲಾ ಕಾರ್ಯಕ್ರಮಗಳಿಗೂ ಬೆನ್ನೆಲುಬಾಗಿ ನಿಂತವರು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ "ನಿರ್ಮಾಣ್ ಶೆಲ್ಟರ್ಸ್"ನ ಮಾಲೀಕರಾದ ಶ್ರೀ ಲಕ್ಷ್ಮಿನಾರಾಯಣ ಅವರು. ಕಟ್ಟಡ ನಿರ್ಮಾಣದಂತಹ ಉದ್ಯಮದಲ್ಲಿದ್ದರೂ ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಇವರು ಅನಕೃ ಪ್ರತಿಷ್ಠಾನ ಸಹಯೋಗದಲ್ಲಿ ಪ್ರತಿವರ್ಷ ಕನ್ನಡ ಮಾಧ್ಯಮದಲ್ಲಿ ಓದಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡುವುದರ ಮೂಲಕ ಕನ್ನಡ ಸೇವೆ ಮಾಡುತ್ತಿದ್ದಾರೆ.

ಪ್ರತಿಷ್ಠಾನದ ಉದ್ದೇಶಗಳು:

ಅನಕೃ ಜ್ಞಾಪಕಾರ್ಥವಾಗಿ "ಅನಕೃ ಕಲಾಭವನ" ಕಟ್ಟಡವನ್ನು ನಿರ್ಮಿಸುವುದು. ಇದರಲ್ಲಿ ಕನ್ನಡ ಕಾರ್ಯಕ್ರಮಗಳಿಗಾಗಿ ಸಭಾಂಗಣವೂ ಮತ್ತು ಸಂಶೋಧನಾಕೇಂದ್ರವೂ ಇರುತ್ತದೆ.

ಅನಕೃ ರಚಿಸಿರುವ ಎಲ್ಲಾ ಸಾಹಿತ್ಯಕೃತಿಗಳನ್ನು ಸಂಗ್ರಹಿಸಿ ಜೋಪಾನಮಾಡುವುದು.

ಅನಕೃ ಕುರಿತು ಪ್ರಕಟವಾದ ಗ್ರಂಥಗಳು, ಲೇಖನಗಳು, ಸುದ್ಧಿಗಳನ್ನು ಸಂಗ್ರಹಿಸಿ ಜೋಪಾನಮಾಡುವುದು

ಅನಕೃ ಅವರ ಲಭ್ಯವಿರುವ ಧ್ವನಿಸುರುಳಿಗಳು/ದೃಶ್ಯಸುರುಳಿಗಳನ್ನು ಸಂಗ್ರಹಿಸಿ ರಕ್ಷಿಸುವುದು.

ಅನಕೃ ಅವರ ಹಸ್ತಪ್ರತಿಗಳು, ಟಿಪ್ಪಣಿ, ದಿನಚರಿ ಮತ್ತಿತರ ಮುಖ್ಯವಾದ ವಸ್ತುಗಳನ್ನು ಸಂಗ್ರಹಿಸುವುದು.

ಅನಕೃ ಜನ್ಮದಿನ ಮತ್ತು ಮರಣದಿನದಂದು ನಾಡಿನಾದ್ಯಂತ ಕಾರ್ಯಕ್ರಮಗಳನ್ನೂ, ಭಾಷಣಗಳನ್ನು ಏರ್ಪಡಿಸುವುದು.

ಶಾಲಾ-ಕಾಲೇಜು ಮಟ್ಟದಲ್ಲಿ ಕನ್ನಡ ಚರ್ಚಾಕೂಟಗಳು, ಲೇಖನ ಸ್ಪರ್ಧೆಗಳನ್ನು ಏರ್ಪಡಿಸುವುದು ಮತ್ತು ತನ್ಮೂಲಕ ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಮೂಡಿಸುವುದು.

ಶಾಲಾ-ಕಾಲೇಜು ಮಟ್ಟದಲ್ಲಿ ಯೋಗ್ಯ ಕನ್ನಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನವನ್ನು ನೀಡುವುದು.

ಅನಕೃ ಪ್ರತಿಷ್ಠಾನದ ಕಾರ್ಯಕ್ರಮಗಳ ಪಟ್ಟಿ:

ಸ್ಮರಣ ದಿನಾಚರಣೆ: ದಿನಾಂಕ ೧೧/೮/೯೩, ಜಯನಗರದ ಹೆಚ್.ಎನ್ ಕಲಾಕ್ಷೇತ್ರದಲ್ಲಿ ಸರ್ವಶ್ರೀ ಗೊ.ರು. ಚೆನ್ನಬಸಪ್ಪ, ಮಾಸ್ಟರ್ ಹಿರಣ್ಣಯ್ಯ, ಶಾಮಂ ಕೃಷ್ಣರಾಯರಿಂದ ಭಾಷಣಗಳು. ಸ್ಮರಣ ಸಂಚಿಕೆ ಬಿಡುಗಡೆ. ಜ್ಯೋತಿ ಬೆಳಗುವುದು.

ಅನಕೃ ಪ್ರತಿಷ್ಠಾನದ ಸ್ಥಾಪನೆಗೆ ಪೂರ್ವಿ ಸಭೆ: ದಿನಾಂಕ ೧೪/೧೧/೯೩, ಅನಕೃ ಅವರ ಸ್ವಗೃಹ ’ ಅನ್ನಪೂರ್ಣದಲ್ಲಿ’ ಸರ್ವಶ್ರೀ ಹಾರ್ನಳ್ಳಿ ರಾಮಸ್ವಾಮಿ (ಕಾನೂನು ಮಂತ್ರಿಗಳು), ಪೆರಿಕಲ್ ಮಲ್ಲಪ್ಪ (ಬೆಂಗಳೂರು ಅಭಿವೃದ್ಧಿ ಮಂತ್ರಿ), ಪ್ರೊ| ಎಲ್.ಎಸ್.ಶೇಷಗಿರಿರಾವ್ (ವಿಮರ್ಶಕರು) ಮತ್ತಿತರ ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಆರಂಭೋತ್ಸವ: ದಿನಾಂಕ ೭/೨/೯೪, ಎ.ಡಿ.ಎ ರಂಗಮಂದಿರದಲ್ಲಿ ಸರ್ವಶ್ರೀ ಹಾರ್ನಳ್ಳಿ ರಾಮಸ್ವಾಮಿಯವರ ಅಧ್ಯಕ್ಷತೆ, ವೀರಪ್ಪ ಮೊಯಿಲಿ (ಮುಖ್ಯ ಮಂತ್ರಿಗಳು) ಮುಖ್ಯ ಅತಿಥಿ, ಡಾ| ವೇಣು ಗೋಪಾಲರಾವ್ ಮತ್ತು ಅ.ರಾ. ಮಿತ್ರ ಭಾಷಣಕಾರರು. ವಿಜೃಂಭಣೆಯ ಉತ್ಸವ. ದೀಪ ಬೆಳಗುವುದು. ಅನಕೃ ಕಲಾ ಭವನದ ನಿವೇಶನಕ್ಕಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುವುದು. ‘ಜ್ವಾಲಮಾಲಿನಿ’ ನೃತ್ಯ ನಾಟಕ ಅಭಿನಯ. ದೂರದರ್ಶನ, ಆಕಾಶವಾಣಿ ಮತ್ತು ಸುದ್ಧಿ ಮಾಧ್ಯಮಗಳಿಂದ ವಿಸ್ತೃತ ಪ್ರಚಾರ.

ಅನಕೃ ಜನ್ಮ ದಿನಾಚರಣೆ: ದಿನಾಂಕ ೯/೫/೯೪, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಾರ್ನಳ್ಳಿ ರಾಮಸ್ವಾಮಿಯ ಅಧ್ಯಕ್ಷತೆ, ಪಾಟೀಲ ಪುಟ್ಟಪ್ಪ, ಅ.ರಾ. ಮಿತ್ರ, ಎಂ.ಎಚ್ ಶ್ರೀಕಂಠಯ್ಯ ಅವರಿಂದ ಭಾಷಣಗಳು. ಶ್ರೀಮತಿ ಎಚ್.ಆರ್. ಲೀಲಾವತಿ ತಂಡದವರಿಂದ ಕನ್ನಡ ಗೀತೆಗೆಳು.

ನಾಟಕ ಪ್ರದರ್ಶನ: ದಿನಾಂಕ ೯/೧/೯೫, ಅನಕೃ ಅವರ ‘ಕಣ್ಣೀರು’ ಕಾದಂಬರಿಯ ರಂಗರೂಪವನ್ನು ಶ್ರೀ ಬಿ. ಎಸ್. ಕೇಶವರಾಯರಿಂದ ಮಾಡಿಸಿ, ಮೈಸೂರಿನ ಕಲಾಮಂದಿರದಲ್ಲಿ ಎರಡು ಪ್ರದರ್ಶನಗಳು, ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಒಂದು ಪ್ರದರ್ಶನ ಕೊಡಲಾಯಿತು. ಅಭಿನಯಿಸಿದ ಕಲಾವಿದರು ಮೈಸೂರಿನ ‘ರಂಗಪ್ರಿಯ’ ರು. ಶ್ರೀ ಚದುರಂಗ ಅವರು ಮುಖ್ಯ ಅತಿಥಿಗಳು.

ಸಾಹಿತ್ಯಾವಲೋಕನ: ೨೨/೧/೯೫, ಪುರಭವನ ಸಾಗರ. ಭಾಗವಹಿಸಿದವರು ಸರ್ವಶ್ರೀ ಸಾ. ಶಿ. ಮರುಳಯ್ಯ, ಗರುಡನಗಿರಿ ನಾಗರಾಜ, ರವೀಂದ್ರನಾಥ್ ಅನಕೃ, ಕೆ. ಟಿ. ಚಂದ್ರಶೇಖರನ್ ಮತ್ತು ಬಿ. ಎಂ. ರಂಗನಾಥ್. ಅಧ್ಯಕ್ಷತೆ ಶ್ರೀ ಮಹಾಬಲೇಶ್ವರ ಭಟ್ಟರು. ಹೆಚ್ಚಿನ ಸಂಖ್ಯೆಯ ವಿಚಾರವಂತ ಶ್ರೋತೃ ಸಮೂಹದಲ್ಲಿ ಸೊಗಸಾದ ಕಾರ್ಯಕ್ರಮ.

ಅನಕೃ ಸಾಹಿತ್ಯಗೋಷ್ಠಿ: ದಿನಾಂಕ ೪/೨/೯೬, ಆರ್. ಟಿ. ನಗರ ಕಾರಂತರ ವಿಚಾರ ವೇದಿಕೆ ಮತ್ತು ಅನಕೃ ಪ್ರತಿಷ್ಠಾನಗಳ ಸಹಯೋಗದಲ್ಲಿ. ಭಾಗವಹಿಸಿದವರು ಸರ್ವಶ್ರಿ ಎ. ಎಸ್. ಮೂರ್ತಿ, ರವೀಂದ್ರನಾಥ್ ಅನಕೃ, ಆರ್. ಆರ್. ಪಾಂಗಾಳ್ ಮತ್ತು ಕವಿಯತ್ರಿಯರು ಇತ್ಯಾದಿ.

ಅನಕೃ ವಿಚಾರವೇದಿಕೆ: ದಿನಾಂಕ ೭/೪/೯೬, ನಂ ೫೭ ವಿದ್ಯಾಪೀಠ ರಸ್ತೆ ಶ್ರೀ ಕೆ. ಟಿ. ಚಂದ್ರಶೇಖರನ್ ಅವರ ಗೃಹದಲ್ಲಿ ಉದ್ಘಾಟನೆ. ಉಪನ್ಯಾಸ ಶ್ರಿ ಬಿ. ಎಸ್. ಕೇಶವರಾವ್. ಈ ವಿಚಾರವೇದಿಕೆಯಲ್ಲಿ ಪ್ರತಿ ತಿಂಗಳ ಎರಡನೆ ಭಾನುವಾರ ಅನಕೃ ಅವರ ವ್ಯಕ್ತಿತ್ವ ಸಾಧನೆಗಳ ಬಗ್ಗೆ ವಿಚಾರ, ಚರ್ಚೆ ಇತ್ಯಾದಿ.ಇದುವರೆವಿಗೂ ಅನೇಕ ವಿಮರ್ಶಕರು, ಸಾಹಿತಿಗಳು, ಪತ್ರಿಕಾಕರ್ತರು ಭಾಗವಹಿಸಿದ್ದಾರೆ. ಹನ್ನೊಂದು ಕಾರ್ಯಕ್ರಮಗಳು ನಡೆದಿವೆ.

ಅನಕೃ ಸ್ಮಾರಕ ಚರ್ಚಾಸ್ಪರ್ಧೆ: ಮೇ ೯೬, ನಾನಾ ಶಾಲೆಗಳ ೩೦ ಮಕ್ಕಳು ಭಾಗವಹಿಸಿದರು. ಶ್ರೀ ಚಂದ್ರಯ್ಯ, ರವೀಂದ್ರನಾಥ್ ಅನಕೃ ಮತ್ತಿತರರು ಅನಕೃ ಅವರ ಬಹುಮುಖ ಪ್ರತಿಭೆಯನ್ನು ಪರಿಚಯಿಸಿದರು. ಬಹುಮಾನ ವಿತರಣೆ ಆಯಿತು.

ಅನಕೃ ಭಾವಚಿತ್ರ ಅನಾವರಣ: ಪಿ ಅಂಡ್ ಟಿ ಸಭಾಂಗಣ ರಾಜಭವನ ರಸ್ತೆ, ಜುಲೈ ೯೬. ಸರ್ವಶ್ರೀ ಲೋಹಿತಾಶ್ವ ಮುಂತಾದವರು ಭಾಗವಹಿಸಿದರು.

ಐ. ಟಿ. ಐ ಕಲಾಸಂಘ ಹಾಗೂ ಅನಕೃ ಸಾಹಿತ್ಯಗೋಷ್ಟಿ: ಎ. ಡಿ. ಎ ರಂಗಮಂದಿರ. ಶ್ರೀ ಚಿದಾನಂದ ಮೂರ್ತಿಯವರ ಅಧ್ಯಕ್ಷತೆ. ೮ ಜನ ಉದಯೋನ್ಮುಖ ಸಾಹಿತಿಗಳು, ಅನಕೃ ಸಾಹಿತ್ಯ ಪ್ರತಿಭೆಯ ವಿವಿಧ ಆಯಾಮಗಳನ್ನು ಮಂಡಿಸಿದರು.

ಕನ್ನಡ ಜಾಗೃತಿ ವರ್ಷ ಅನಕೃ ಸ್ಮರಣೆ: ಕೆ. ಎಸ್. ಆರ್. ಟಿ. ಸಿ ಕನ್ನಡ ಕ್ರಿಯಾ ಸಮಿತಿ. ೭/೧೦/೧೯೯೩. ಭಾಷಣಕಾರರು ಚಿತ್ರನಟ ಅಶೋಕ್, ಶ್ರೀ ಜಿ. ನಾರಾಯಣ, ಎಲ್. ಎಸ್. ಶೇಷಗಿರಿರಾವ್, ಪಿ. ಕೋದಂಡರಾಮಯ್ಯ ಮುಂತಾದವರು.

ANAKRU - Man and his achievements: ೧೧/೫/೯೩. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್. ಭಾಷಣಕಾರರು ಪ್ರೊ | ಎಲ್. ಎಸ್. ಶೇಷಗಿರಿರಾವ್.

ಅನಕೃ ರಜತೋತ್ಸವ: ೨೫ನೇ ಪುಣ್ಯತಿಥಿಯ ದಿನಾಚರಣೆ. ೧೪/೭/೯೬. ಕುವೆಂಪು ಕಲಾಕ್ಷೇತ್ರ. ನಾಲ್ವರು ಖ್ಯಾತ ವ್ಯಕ್ತಿಗಳಿಗೆ ಸನ್ಮಾನ. ಶ್ರೀ ಜಿ. ಎಸ್. ಶಿವರುದ್ರಪ್ಪ (ಕಾವ್ಯ, ಸಂಶೋಧನೆ) ಶ್ರೀ ಸಂತೋಷ ಕುಮಾರ ಗುಲ್ವಾಡಿ (ಪತ್ರಿಕಾಕರ್ತರು) ಶ್ರೀಮತಿ ಮಾಯಾ ರಾವ್ (ನೃತ್ಯ) ಮತ್ತು ಶ್ರೀ ಜಿ. ವೆಂಕಟಸುಬ್ಬಯ್ಯ (ಸಾಹಿತ್ಯ, ಸಂಶೋಧನೆ). ಭಾಷಣಕಾರರು ಶ್ರೀ ಪಾಟೀಲ ಪುಟ್ಟಪ್ಪ - ಕನ್ನಡ ಚಳುವಳಿ ಮತ್ತು ಅನಕೃ. ಶ್ರೀ ಜಿ. ಎಸ್. ಸಿದ್ದಲಿಂಗಯ್ಯ -ವೀರಶೈವ ಸಾಹಿತ್ಯಕ್ಕೆ ಅನಕೃ ಕೊಡುಗೆ. ಅಂದು ಅನಕೃ ಚಾರಿತ್ರಕ ಕಾದಂಬರಿ ‘ತಪೋಬಲ’ ಆಧಾರಿತ ‘ಸಮದರ್ಶನ’ ಎಂಬ ನಾಟಕವನ್ನು ಕಿರ್ಲೋಸ್ಕರ್ ಮನರಂಜನಾ ತಂಡದವರು ಅಭಿನಯಿಸಿದರು.

ಅನಕೃ ಕಾದಂಬರಿಗಳಲ್ಲಿ ಮಹಿಳೆ: ೧೯/೧/೯೭ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಶ್ರೀ ಎ. ಸುಬ್ಬರಾವ್, ಶ್ರೀಮತಿ ವರದ ಶ್ರೀನಿವಾಸ್ ಅವರಿಂದ ಉಪನ್ಯಾಸ.