ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಬುಕ್ಕಾಂಬುಧಿ ಪ್ರಾದೇಶಿಕ ಕನ್ನಡ ಶಬ್ದಕೋಶ

  ಗ್ಯಾಪಕ -

   ನೆನಪು ಮಾಡುವುದಕ್ಕೆ ಗ್ಯಾಪಕ ಅನ್ನುವ ಪದವನ್ನು ಹೇಳುವುದು ರೂಢಿ.
   ಉದಾ: ನಾಳೆ ಮನೆಗೆ ಸ್ವಾಮಿಗಳು ಬರ್ತಾರೆ. ಅಣ್ಣು, ಊವು ತರಬೇಕು. ಸ್ವಲ್ಪ ಗ್ಯಾಪಕ ಮಾಡು.
   ಪದರೂಪ: ಗ್ಯಾಪಕ (ಜ್ಞಾಪಕ)

  ಗ್ರಾಮದೇವತೆಗಳು -

   ಅಣ್ಣಮ್ಮ, ಕದಿರಮ್ಮ, ಅಂಕಾಳಮ್ಮ, ಮಾರಮ್ಮ, ಕೊಲ್ಲಾಪುರದಮ್ಮ, ಬದಿಗೇರಮ್ಮ, ಅಂತರಗಟ್ಯಮ್ಮ ಇವೆಲ್ಲ ಗ್ರಾಮದೇವತೆಗಳು. ಒಂದೊಂದು ಮನೆಯವರೂ ಒಂದೊಂದು ಗ್ರಾಮದೇವತೆಗೆ, ವರ್ಷಕ್ಕೊಂದಾವರ್ತಿ ನೇಮದಿಂದ ನಡೆದುಕೊಳ್ಳುವುದು ರೂಢಿ. ಮಾರಮ್ಮ ಮುಂತಾದ ದೇವತೆಗಳಿಗೆ ಕುರಿ, ಕೋಣ ಮತ್ತು ಮೇಕೆಯನ್ನು ಬಲಿಕೊಡುತ್ತಿದ್ದರು. ಬಲಿಕೊಡುವ ಪ್ರಾಣಿಯ ಕೊರಳಿಗೆ ಹೂವಿನಹಾರ ಹಾಕಿ ಊರಲ್ಲೆಲ್ಲ ಮೆರವಣಿಗೆ ಮಾಡಿ ದೇವಸ್ಥಾನದ ಮುಂದೆ ಕಡಿಯುತ್ತಿದ್ದರು!
   ಉದಾ: ಮುಂದಿನವಾರ ನಮ್ಮೂರಲ್ಲಿ ಗ್ರ್ರಾಮದೇವತೆ ಅಂಕಾಳಮ್ಮನ ಉತ್ಸವವಿದೆ.

  ಗ್ರಾಮಪಂಚಾಯಿತಿ -

   ಹಳ್ಳಿಗೆ ಸಂಬಂಧಪಟ್ಟ ವ್ಯವಹಾರಗಳನ್ನೆಲ್ಲ ವಿಮರ್ಶೆಮಾಡಿ ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ಏಳೆಂಟು ಜನ ಮುಖ್ಯಸ್ಥರಾದವರನ್ನು ಚುನಾಯಿಸುತ್ತಾರೆ. ಆ ಗುಂಪಿಗೆ ಗ್ರಾಮಪಂಚಾಯಿತಿ ಎಂದು ಹೆಸರು. ಗ್ರಾಮಪಂಚಾಯಿತಿ ಮಾಡಿದ ತೀರ್ಮಾನಕ್ಕೆ ಹಳ್ಳಿಯವರು ಬದ್ಧರಾಗಿರಬೇಕು.
   ಉದಾ: ನಾಳೆ ಗ್ರಾಮಪಂಚಾಯಿತಿ ಸೇರುತ್ತಂತೆ. ಸಿದ್ದಣ್ಣನ ಅರ್ಜಿಗೆ ಏನಾದರೂ ತೀರ್ಮಾನ ಆಗಬಹುದು.
   ನೋಡಿ: ಚಾವಡಿಕಟ್ಟೆ

  ಚಂದ್ರಿಕೆ -

   ಚಂದ್ರಿಕೆ ಎಂದರೆ ಬೆಳುದಿಂಗಳು ಎಂದು ಅರ್ಥವಿದೆ. ಆದರೆ ಬಳಕೆಯಲ್ಲಿ ಉಂಡಿಗೆಗೆ ಚಂದ್ರಿಕೆ ಎಂದು ಕರೆಯುತ್ತಾರೆ.
   ನೋಡಿ: ಉಂಡಿಗೆ

  ಚಕ್ಕಂದ -

   ಸುಮ್ಮನೆ ಬಾಯಿಗೆ ಬಂದದ್ದನ್ನು ಹರಟೆ ಹೊಡೆಯುತ್ತ ಕೂತರೆ ಚಕ್ಕಂದ ಎಂದು ಹೇಳುವುದು ರೂಢಿ.
   ಉದಾ: ಮದುವೆ ಎಂದರೆ ಸುಮ್ಮನೇನಾ, ನೂರಾಎಂಟು ಕೆಲಸಗಳಿವೆ. ಚಕ್ಕಂದ ಮಾಡ್ತಾ ಕುಂತುಬಿಡಬ್ಯಾಡ್ರಿ.

  ಚಕ್ಕುಬಂದಿ -

   ಹಳ್ಳಿಯಲ್ಲಿ ವಾಸವಾಗಿರುವ ಪ್ರತಿಯೊಬ್ಬರ ಮನೆ, ತೋಟ, ಹೊಲ, ಗದ್ದೆಗಳ ಅಳತೆ ಪ್ರಮಾಣ. ಅದರ ಯಾವ ಯಾವ ದಿಕ್ಕಿನಲ್ಲಿ ಏನೇನಿದೆ ಎಂದು ಗುರ್ತಿಸಿ, ಒಂದು ಪುಸ್ತಕದಲ್ಲಿ ದಾಖಲೆ ಮಾಡುತ್ತಾರೆ. ಅದಕ್ಕೆ ಚಕ್ಕುಬಂದಿ ಎಂದು ಹೆಸರು. ಇದು ಹಳ್ಳಿಗೆ ಸಂಬಂಧಪಟ್ಟ ಶ್ಯಾನುಭೋಗರ ಕೆಲಸ. ಹಳ್ಳಿಯಲ್ಲಿರುವ ಪ್ರತಿಯೊಬ್ಬ ರೈತನಿಗೂ ಒಂದು ಪ್ರತ್ಯೇಕವಾದ ಪುಸ್ತಕವಿರುತ್ತೆ. ಅದರಲ್ಲಿ ಆಯಾಯ ರೈತನಿಗೆ ಸೇರಿದ ಆಸ್ತಿಪಾಸ್ತಿಗಳ ಪ್ರತಿಯೊಂದು ವಿಷಯವೂ ಉಲ್ಲೇಖವಾಗಿರುತ್ತೆ.
   ಉದಾ: ರಾಮಪ್ಪನ ಮನೆ ಚಕ್ಕುಬಂದಿ ಪ್ರಕಾರ ಪೂರ್ವಕ್ಕೆ ಹೊಲ, ದಕ್ಷಿಣಕ್ಕೆ ತೋಟ, ಉತ್ತರಕ್ಕೆ ದೇವಸ್ಥಾನ, ಪಶ್ಚಿಮಕ್ಕೆ ಕೋಟೆ ಇದೆ.

  ಚಕ್ರಬಡ್ಡಿ -

   ನೋಡಿ: ಸುಸ್ತಿಬಡ್ಡಿ

  ಚಟ್ಟ -

   ಮನುಷ್ಯ ಸತ್ತಾಗಲೂ ಅನೇಕ ವಿಧಿಗಳಿರುತ್ತವೆ. ಹೆಣಗಳನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಬೊಂಬಿನಿಂದ ಮಾಡಿರುವ ಏಣಿಯಾಕಾರದ ಒಂದು ಸಾಧನ. ಆರು ಅಡಿ ಉದ್ದದ ಎರಡು ಬೊಂಬುಗಳನ್ನಿಟ್ಟು ಮಧ್ಯೆ ಸುಮಾರು ಎರಡೂವರೆ ಅಡಿ ಉದ್ದದ ಬೊಂಬಿನ ಸೀಳುಗಳನ್ನು ಅಡ್ಡಡ್ಡಲಾಗಿ ಇಟ್ಟು ಹುರಿಯಿಂದ ಕಟ್ಟುತ್ತಾರೆ. ಅದರ ಮೇಲೆ ಹೆಣವನ್ನು ಮಲಗಿಸಿ ಕೆಳಕ್ಕೆ ಬೀಳದಂತೆ ತೆಂಗಿನ ಹುರಿಯಿಂದ ಬಿಗಿಯುತ್ತಾರೆ. ಅದಕ್ಕೆ ಚಟ್ಟ ಎಂದುಹೇಳುವುದು. ನಾಲ್ಕು ಜನಗಳು ಚಟ್ಟವನ್ನು ಹೆಗಲಮೇಲೆ ಇಟ್ಟುಕೊಂಡು ಸ್ಮಶಾನಕ್ಕೆ ಸಾಗಿಸುತ್ತಾರೆ. ಚಟ್ಟವನ್ನು ದಬ್ಬೆ ಕಟ್ಟುವುದು ಎಂದು ಹೇಳುವುದೂ ರೂಢಿ. ಈ ಸಂಪ್ರದಾಯ ಕೆಲವು ಜನಾಂಗಗಳಿಗೆ ಮಾತ್ರ. ಇತರೆ ಜನಗಳು ಹೆಣವನ್ನು ಭೂಮಿಯಲ್ಲಿ ಹೂಳುತ್ತಾರೆ. ತಂದೆತಾಯಿಗಳು ಸತ್ತಾಗ ಗಂಡುಮಕ್ಕಳು ತಲೆಕೂದಲನ್ನೆಲ್ಲ ತೆಗೆಸುತ್ತಾರೆ. ಅವರು ಸ್ಮಶಾನದಲ್ಲಿ ಮಾಡುವ ವಿಧಿಗಳಿಗೆ ಅನೇಕಬಾರಿ ತಣ್ಣೀರಿನಲ್ಲಿ ಸ್ನಾನಮಾಡಬೇಕಾಗಿರುವುದರಿಂದ ಈ ಸಂಪ್ರದಾಯವನ್ನು ಅನುಸರಿಸಿರಬಹುದು.
   ಉದಾ: ಇನ್ನೇನು ಎಲ್ಲ ಮುಗಿದಂಗಾಯ್ತು, ದಬ್ಬೆ ಕಟ್ರಪ್ಪ. ಚಟ್ಟಕಟ್ಟಲು ತಿಮ್ಮಪ್ಪ ಬಂದಿದ್ದಾನೆ.
   ಉದಾ: ಅಪ್ಪನವರಿಗೆ ಚಟ್ಟ, ಅಮ್ಮನವರಿಗೆ ಪಟ್ಟ ಗಾದೆ.

  ಚಟ್ಟಿ -

   ತಾಮ್ರದ ಸಣ್ಣಪಾತ್ರೆಗೆ ಚಟ್ಟಿ ಎನ್ನುತ್ತಾರೆ. ನೀರು ಕಾಯಿಸುವ ಹಂಡೆಯಿಂದ ಸ್ನಾನಮಾಡುವ ನೀರನ್ನು ತುಂಬಿಕೊಳ್ಳಲು ಚಟ್ಟಿಯನ್ನು ಉಪಯೋಗಿಸುತ್ತಾರೆ. ಚಟ್ಟಿಯ ಬಾಯಿ ಸಣ್ಣದಾಗಿರುತ್ತೆ.
   ಉದಾ: ಎರಡು ಬಚ್ಚಲುಮನೇಲು ಬೇರೆಬೇರೆ ಚಟ್ಟಿ ಇಡಿ.
   ನೋಡಿ: ಚೊಂಬು, ತಂಬಿಗೆ

  ಚಟ್ಟುಬಡಿಯುವುದು -

   ಚಟ್ಟುಬಡಿಯುವುದೂ ಮದುವೆಯ ಒಂದು ಅಂಗ. ಓಕುಳಿ ನೀರನ್ನು ಒಂದು ತಟ್ಟೆಯಲ್ಲಿ ಹಾಕಿ ವಧು ಕೈಯ್ಯನ್ನು ಅದರಲ್ಲಿ ಅದ್ದಿ ಮನೆಯ ಹೊರಗಡೆ ಗೋಡೆಯಮೇಲೆ ಹತ್ತಾರು ಕಡೆ ಒತ್ತುತ್ತಾಳೆ. ಅದು ಹೆಣ್ಣಿನಮನೆಯವರಿಗೆ ಮಾತ್ರ.
   ಉದಾ: ನಿನ್ನೆ ಇದು ಚಟ್ಟುಬಡಿದ ಗುರ್ತುಗಳು.

  ಚದರ -

   ಉದಾ: ರಾಮಪ್ಪನು ಹತ್ತು ಚದರದ ಮನೆಯನ್ನು ಕಟ್ಟಿಸುತ್ತಿದ್ದಾನೆ.
   ನೋಡಿ: ಅಂಕಣ

  ಚನ್ನಂಗಿಬೇಳೆ -

   ಇದು ಒಂದು ವಿಶೇಷ ತರಹದ ತೊಗರಿಬೇಳೆ. ನಾವು ನಿತ್ಯವೂ ಬಳಸುವ ತೊಗರಿಬೇಳೆಯ ಅರ್ಧದಷ್ಟು ಗಾತ್ರವಿದ್ದು, ಬಣ್ಣ ಕೆಂಪಾಗಿರುತ್ತೆ. ಚನ್ನಂಗಿಬೇಳೆ ಹಾಕಿ ಮಾಡಿದ ಸಾರು ಬಹಳ ರುಚಿ.
   ಉದಾ: ನಾಳೆ ನೆಂಟರು ಬಂದಾಗ ಚನ್ನಂಗಿಬೇಳೆ ಹಾಕಿ ಸಾರುಮಾಡ್ಬಿಡಿ.
   ನೋಡಿ: ಸಾರು

  ಚನ್ನಾಮಣೆ -

   ನೋಡಿ: ಅಳಿಗುಳಿಮಣೆ

  ಚಪ್ಪರದವರೆ -

   ಅವರೆಬಳ್ಳಿಯನ್ನು ಚಪ್ಪರದಮೇಲೆ ಹಬ್ಬಿಸಿ ಬೆಳೆಸುತ್ತಾರೆ. ಇದು ಚಪ್ಪರದವರೆ. ಇನ್ನ್ನೊಂದು ವಿಧವಾದ ಅವರೆಯನ್ನು ಹೊಲದಲ್ಲಿ ಪಕ್ಕಪಕ್ಕಕ್ಕೆ ಬೀಜವನ್ನು ನೆಟ್ಟು ಬೆಳೆಸುತ್ತಾರೆ. ಹೊಲದವರೆ ಗಿಡ ಎತ್ತರಕ್ಕೆ ಬೆಳೆಯುವುದಿಲ್ಲ. ಇದು ಸಾಮಾನ್ಯವಾಗಿ ಮಾಗಿ ಕಾಲದಲ್ಲಿ ಹಿಮ ಬೀಳುವಾಗ ಮಾತ್ರ ಬೆಳೆಯುತ್ತೆ. ಈ ತರಹ ಅವರೆಕಾಳನ್ನು ನೀರಿನಲ್ಲಿ ನೆನೆಸಿ ಹಿಚುಕಿದರೆ ಸಿಪ್ಪೆ ಬೇರೆಯಾಗಿ ಕಾಳು ಹೊರಕ್ಕೆ ಬರುತ್ತೆ. ಇದನ್ನು ಹಿಚಕವರೆ ಅಥವಾ ಚಿಲಕವರೆ ಎಂದು ಹೇಳುವುದು ರೂಢಿ. ಹಿಚಕವರೆಯನ್ನು ಬಳಸಿ ಇಡ್ಲಿ, ಉಪ್ಪಿಟ್ಟು, ಅಕ್ಕಿರೊಟ್ಟಿ ಮಾಡುತ್ತಾರೆ. ಹಿಚಕವರೆಯನ್ನು ಎಣ್ಣೆಯಲ್ಲಿ ಕರಿದು ಖಾರಹಾಕಿದರೆ ತಿನ್ನುವುದಕ್ಕೆ ರುಚಿಯಾಗಿರುತ್ತೆ.
   ಉದಾ: ಚಪ್ಪರದವರೆಬಳ್ಳಿ ಬಾಡ್ತಾ ಇದೆ. ಅವರೆಕಾಯೆಲ್ಲ ಕಿತ್ತು ಒಣಗಿಸಬೇಕು.
   ನೋಡಿ: ಚಿಲಕವರೆ, ಹಿಚಕವರೆ

  ಚಪ್ಪರವಿಸರ್ಜನೆ -

   ಮದುವೆಯ ಎಲ್ಲ ಕಾರ್ಯಕ್ರಮಗಳು ಮುಗಿದಮೇಲೂ ಮಾರನೆಯದಿನ ಒಂದು ಕಾರ್ಯಕ್ರಮ - ಚಪ್ಪರವಿಸರ್ಜನೆ. ಚಪ್ಪರಕ್ಕೆ ಕಟ್ಟಿದ್ದ ಬಾಳೆಕಂದನ್ನು ಅಲುಗಿಸಿ ತೆಗೆಯುವುದು. ಇದು ಹೆಣ್ಣಿನಕಡೆಯವರಿಗೆ ಮಾತ್ರ. ಆ ದಿನವೂ ಪಾಯಸದೂಟವೆ!
   ಉದಾ: ಇವತ್ತು ಚಪ್ಪರವಿಸರ್ಜನೆ, ಇಲ್ಲಿಗೇ ಬಂದುಬಿಡಿ ಭೋಜನಕ್ಕೆ.

  ಚಪ್ಪರಹಾಕುವುದು -

   ಮದುವೆ, ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ಮತ್ತು ಹಳ್ಳಿಯಲ್ಲಿ ಸಾಮೂಹಿಕವಾಗಿ ನಡೆಸುವ ದೇವತಾಕಾರ್ಯಗಳಲ್ಲಿ ಚಪ್ಪರ ಹಾಕುತ್ತಾರೆ. ಬಾಳೇಕಂದು, ತೆಂಗಿನಸೋಗೆ ಮತ್ತು ಮಾವಿನಎಲೆಗಳಿಂದ ಚಪ್ಪರ ತಯಾರಿಸುತ್ತಾರೆ. ಮದುವೆಗೆ ಹಾಕಿದ ಚಪ್ಪರವನ್ನು ಮದುವೆಯ ಕಾರ್ಯಕಲಾಪಗಳೆಲ್ಲ ಮುಗಿದಮೇಲೆ ಅದಕ್ಕೆ ಪೂಜೆಮಾಡಿ ನಂತರ ಅದನ್ನು ತೆಗೆಯುತ್ತಾರೆ.
   ಬೊಂಬು ಮತ್ತು ಗಿಡಗಳ ರೆಂಬೆಗಳನ್ನು ಉಪಯೋಗಿಸಿ ಮಾಡಿದ ಚಪ್ಪರಕ್ಕೆ, ಹೀರೆಕಾಯಿ, ಸೌತೆಕಾಯಿ, ಸೀಮೆಬದನೆಕಾಯಿ, ಅವರೇಕಾಯಿ ಅಲ್ಲದೆ ಹೂವಿನ ಬಳ್ಳಿಗಳನ್ನು ಹಬ್ಬಿಸುತ್ತಾರೆ.
   ಉದಾ: ನಾಡಿದ್ದು ದೇವರಸಮಾರಾಧನೆ, ಇವತ್ತೇ ಚಪ್ಪರ ಹಾಕಿಬಿಡಿ.

  ಚರಂಡಿ -

   ರಸ್ತೆಯಮೇಲೆ ಬಿದ್ದ ನೀರು, ಮನೆಯ ಬಚ್ಚಲು ಮುಂತಾದ ಜಾಗಗಳಿಂದ ಹೊರಗಡೆ ಬರುವ ನೀರು ಹರಿದುಹೋಗಲು, ರಸ್ತೆಯ ಅಂಚಿನಲ್ಲಿ ಮಾಡಿರುವ ಭಾಗಕ್ಕೆ ಚರಂಡಿ ಎನ್ನುತ್ತಾರೆ.
   ಉದಾ: ಹುಲ್ಲು ಸೆತ್ತೆ ಎಲ್ಲ ಸೇರ್ಕಂಡು ನೀರುಕಟ್ಟಿದೆ. ಚರಂಡಿ ಸ್ವಲ್ಪ ಚೊಕ್ಕಟಮಾಡಬೇಕು.

  ಚರಟ -

   ನೋಡಿ: ಗಷ್ಟು

  ಚರುಪು -

   ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳ ದಿವಸ ಅಲ್ಲಿಗೆ ಬಂದಿರುವ ಭಕ್ತಾದಿಗಳಿಗೆ ದೇವರಿಗಾಗಿ ಮಾಡಿದ್ದ ಕೋಸುಂಬರಿ, ಕಡಲೆಕಾಳು ಅಥವಾ ಹೆಸರುಕಾಳಿನ ಉಸಲಿ, ಕಡಲೆಹಿಟ್ಟು, ರಸಾಯನ ಮುಂತಾದ ತಿಂಡಿಗಳನ್ನು ಮಂಗಳಾರತಿಯಾದಮೇಲೆ ಪ್ರಸಾದವಾಗಿ ಹಂಚುತ್ತಾರೆ. ಪ್ರಸಾದವನ್ನೇ ಚರುಪು ಎಂದು ಹೇಳುವುದು ವಾಡಿಕೆ.
   ಉದಾ: ನಿನ್ನೆ ದೇವಸ್ಥಾನದಲ್ಲಿ ಗುಗ್ಗುರಿ ಚರುಪು ಹಂಚಿದರು.

  ಚಳಿಸುವುದು -

   ಒರಳಿನಲ್ಲಿ ಭತ್ತ, ತೊಗರಿಬೇಳೆ, ಹೆಸರುಕಾಳು, ಉದ್ದಿನಕಾಳನ್ನು ಒನಕೆಯಿಂದ ಕುಟ್ಟುವುದಕ್ಕೆ ಚಳಿಸುವುದು ಎಂದು ಹೇಳುತ್ತಾರೆ. ಹಾಗೆ ಚಳಿಸಿದಾಗ ಮೇಲಿನ ಹೊಟ್ಟು ಬೇರೆಯಾಗುತ್ತೆ.
   ಉದಾ: ಪಕ್ಕದಮನೆಯಿಂದ ಎರಡು ಸೇರು ಹೆಸರುಕಾಳನ್ನು ಚಳಿಸಿಕೊಂಡು ಬಾ.

ಈ ತಿಂಗಳ ನಿಘಂಟು ಬಳಕೆ : 41141