“ಕನ್ನಡಲೋಕ” ದ ಬಗ್ಗೆ

ಕನ್ನಡ ಅಕ್ಷರಲೋಕಕ್ಕೆ ಬ್ಲಾಗ್ ತಂತ್ರಜ್ಞಾನ ವರದಾನವಾಗಿದೆ. ಅನೇಕ ಹೆಸರಾಂತ ಲೇಖಕರು, ಪತ್ರಿಕೋದ್ಯಮಿಗಳು, ಹವ್ಯಾಸಿ ಬರಹಗಾರರಿಂದ ಕನ್ನಡ ಬ್ಲಾಗ್ ಲೋಕ ತುಂಬಿಹೋಗಿದೆ. ಹೊಸ ಬರಹಗಾರರಿಗಂತೂ ಬೆನ್ನುತಟ್ಟಿ ಹುರಿದುಂಬಿಸುತ್ತೆ. ಬರೆಯಲು ಆಕರ್ಷಣೆ, ಆಮಿಷವನ್ನು ಒಡ್ಡುತ್ತದೆ. ಇಂದು ಕನ್ನಡದಲ್ಲಿ ಪ್ರತಿನಿತ್ಯ ಕನಿಷ್ಠ ೨೫ ಲೇಖನಗಳಾದರೂ ಬ್ಲಾಗಿಸಲ್ಪಡುತ್ತವೆ. ಮುಂದೊಂದು ದಿನ ದಿನನಿತ್ಯ ಬ್ಲಾಗುಗಳಲ್ಲಿ ತಯಾರಾಗುವ ಒಟ್ಟು ಮಾಹಿತಿ ಪತ್ರಿಕೆಗಳಲ್ಲಿ ಬರುವ ಸುದ್ದಿಯ ಮೊತ್ತವನ್ನು ಮೀರುತ್ತದೆಯಾ? ಮೀರಬಹುದೇನೋ. ಒಂದಷ್ಟು ಬ್ಲಾಗುಗಳನ್ನು ಸೇರಿಸಿ ಪತ್ರಿಕೆಯೊಂದನ್ನೂ ಮಾಡುವ ಕಾಲ ಬರಬಹುದೇನೋ!?

ಇಂತಹ ನೂರಾರು ಬ್ಲಾಗುಗಳಲ್ಲಿ ಪ್ರಕಟಗೊಳ್ಳುವ ಲೇಖನಗಳನ್ನು ಒಗ್ಗೂಡಿಸಿ RSS Feed ಮೂಲಕ ಸಂಗ್ರಹಿಸಿ “ಕನ್ನಡಲೋಕ” ಎಂಬ ಹೆಸರಿನಡಿಯಲ್ಲಿ ಪ್ರಕಟಿಸಲಾಗುತ್ತಿದೆ. ಕನ್ನಡಿಗರು ಪ್ರತಿ ಬಾರಿ ಬರಹ ಉಪಯೋಗಿಸಿದಾಗ ಆಗಿನ ಹೊಸ ಲೇಖನಗಳು ಕಾಣಿಸಿಕೊಳ್ಳುತ್ತವೆ. ಬ್ರೌಸರ್ ನಲ್ಲೇ ನೇರವಾಗಿ “ಕನ್ನಡಲೋಕ” ನೋಡಬಹುದು. ಇಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು, ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮದೂ ಒಂದು ಕನ್ನಡ ಬ್ಲಾಗ್ ಇದ್ದರೆ ಅದನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.